ಗಜಲ್

 ಗಜಲ್


ಏನು ಕೊಳ್ಳಲು ಬಂದನೊ ಏನೊ!  ಗೊಂಬೆಯಂತೆ ನಿಂತೇ ಇದ್ದಾನೆ ಸಂತೆಯಲಿ 

ಏನು ಮರೆತು ಹೋದನೊ ಏನೊ! ಮೂಕನಂತೆ ನಿಂತೇ ಇದ್ದಾನೆ ಸಂತೆಯಲಿ


ಅವಳು ಬರೆದು ಕೊಟ್ಟ ಸರಕುಗಳ ಪಟ್ಟಿ ಕಳೆದು ಹೋಯಿತೊ ಏನೊ 

ಕೂಗುಗಳ ನಡುವೆ ಗರುಡುಗಂಬದಂತೆ ನಿಂತೇ ಇದ್ದಾನೆ ಸಂತೆಯಲಿ


ಯಾವ ಕಾಲದ ನೆನಪಿನ ಚೇಳು ಕಚ್ಚಿ ಯಾವ ನಂಜನ್ನೇರಿಸಿತೋ ಏನೊ

ಮಾರಿಕೊಳ್ಳಲು  ನಿಂತ  ಹರಿಶ್ಚಂದ್ರನಂತೆ  ನಿಂತೇ ಇದ್ದಾನೆ ಸಂತೆಯಲಿ 


ಯಾವ ನಿಜಕೋಶದ ಹೃದಯ ಸಿಡಿದು ಹೆಣವಾಯಿತೊ ಏನೊ  

ಮಹಾಮೌನ ಧರಿಸಿ  ಗೊಮ್ಮಟನಂತೆ ನಿಂತೇ ಇದ್ದಾನೆ ಸಂತೆಯಲಿ


ಅವರವರ ಪಾಡಿನಲಿ ಅವರವರು ಮುಳುಗಿ  ಕಳೆದು ಹೋಗಿದ್ದಾರೆ

ಇವನು ಮಾರಾಟವಾಗದ ಸರಕಿನಂತೆ ನಿಂತೇ ಇದ್ದಾನೆ ಸಂತೆಯಲಿ



ನೀನಾದರೂ ಕದಲಿಸಿ ಕುಳ್ಳಿರಿಸಿ  ಮಾತನಾಡಿಸಬೇಕಿತ್ತು ಕಲ್ಲಳ್ಳಿ 

ಅವನಾರೊ ಏನೊ! ಏಕೋ! ಹುಚ್ಚನಂತೆ ನಿಂತೇ ಇದ್ದಾನೆ ಸಂತೆಯಲಿ 


೨೫.೦೧.೨೦೧೮

ದೊಡ್ಡಕಲ್ಲಹಳ್ಳಿ ನಾರಾಯಣಪ್ಪ

Comments